ಬದನವಾಳು ದುರಂತ ನನ್ನ ಕುಟುಂಬ ಮತ್ತು ಪ್ರಸಾದ್ ಸಾಹೇಬರು…!

ನನ್ನೂರು ಕಿರುಗುಂದ ಪ್ರಾರಂಭದಿಂದಲೂ ಹಲವಾರು ಪ್ರತಿಭಾವಂತರು,ಕಲಾವಿದರು, ಹೋರಾಟಗಾರರನ್ನು ಹೊಂದಿದ ಗ್ರಾಮ ನಾನು ಮತ್ತು ನನ್ನ ಸ್ನೇಹಿತರು 5 ಮತ್ತು 6ನೇ ತರಗತಿಗೆ ಬರುವಷ್ಟರಲ್ಲಿ ಬಹಳ ಮುಖ್ಯವಾಗಿ ಬಹುಜನ ಚಳುವಳಿಯು ನನ್ನೂರಿನಲ್ಲಿ ಬೇರೂರಿಬಿಟ್ಟಿತ್ತು ಹಾಗೂ ನಮ್ಮನ್ನು ಹಾಡುಗಾರಿಕೆ, ಮಾತನಾಡುವ,ಬರೆಯುವ ಶಕ್ತಿಯನ್ನು ನೀಡಿ ತನ್ನ ಮಡಿಲಿಗೆ ಸೆಳೆದುಕೊಂಡುಬಿಟ್ಟಿತ್ತು ಓದುವುದರ ಜೊತೆ ಜೊತೆಗೆ ಆ ವಯಸ್ಸಿನಲ್ಲೇ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುತ್ತಿದ್ದೆವು.
ನಾನಂತೂ ಆ ವಯಸ್ಸಿನಲ್ಲೇ ಶಾಲೆಯ ಪ್ರತಿ ಕಾರ್ಯಕ್ರಮದಲ್ಲಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅಥವಾ ಹೋರಾಟಗಳಲ್ಲಿ ಹಾಡುವುದು ಮಾತನಾಡುವುದು ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ ಆದರೆ ನಾನು ಈ ರೀತಿ ಹೋರಾಟಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ನನ್ನಪ್ಪನಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ…! ಎಷ್ಟೋ ಬಾರಿ ನನಗೆ ಓದುವುದನ್ನು ಬಿಟ್ಟು ಇನ್ಯಾವ ಗುರಿಯು ನಿನಗೆ ಇರಬಾರದು ಎಂದು ಗದರಿಸಿದ್ದು ಉಂಟು ಪ್ರೀತಿಯ ಮಗನಾಗಿದ್ದ ನನಗೆ ಈ ಒಂದು ವಿಚಾರವಾಗಿ ಮಾತ್ರ ಕೈಮಾಡಿದ್ದು ಉಂಟು. ನನ್ನ ತಾಯಿಯ ಬಳಿ ನನ್ನ ಪ್ರತಿಭೆಯ ಬಗ್ಗೆ ಹೇಳಿ ಹೆಮ್ಮೆಪಡುತ್ತಿದ್ದರು ಸಹ ನನ್ನ ಮುಂದೆ ಮಾತ್ರ ತುಂಬಾ ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಘಟನೆ ನನ್ನನ್ನು ತುಂಬಾ ಕಾಡಿತ್ತು ಒಂದು ದಿನ ನನ್ನ ಅಪ್ಪನನ್ನು ಕೇಳಿಯೇ ಬಿಟ್ಟೆ ‘ ಅಪ್ಪ ನನ್ನನ್ನು ಅಷ್ಟು ಪ್ರೀತಿಸುವ ನೀವು ನಾನು ಸಾಮಾಜಿಕವಾಗಿ ತೊಡಿಸಿಕೊಂಡರೆ ನಿಮಗೆ ಏಕೆ ಅಷ್ಟೊಂದು ಕೋಪ ಎಂದು’ ಆಗ ನನ್ನಪ್ಪ ಹೇಳಿದ ವಿಚಾರವೇ ಈ ಬದನವಾಳು ದುರಂತ…!
ಹೌದು ಬಂಧುಗಳೇ, ಈ ಬದನವಾಳು ದುರಂತದಲ್ಲಿ ಅನ್ಯಾಯಕ್ಕೊಳ್ಳಗಾದ ಬಿ.ಆರ್.ಭಾಸ್ಕರ್ ರವರು ನನ್ನ ತಾತ ಹಾಗೂ ಈ ಘಟನೆಯಲ್ಲಿ ಕೊಲೆಗೀಡಾದ ಶ್ರೀಯುತ ನಾರಾಯಣಸ್ವಾಮಿಯವರು ನನ್ನ ಮಾವ( ನನ್ನ ಅಪ್ಪನ ಅಕ್ಕನ ಗಂಡ) ನನ್ನ ತಂದೆ ಈ ವಿಚಾರವಾಗಿ ಹೇಳುತ್ತಾ “ನನ್ನ ಭಾವ ನಾರಾಯಣಸ್ವಾಮಿ ತುಂಬಾ ಬುದ್ಧಿವಂತ ಸರಕಾರಿ ಕೆಲಸದಲ್ಲಿ ಇದ್ದವ ಅವ್ನು ನಿನ್ನಂಗಿಯ ಸಾಮಾಜಿಕ ವ್ಯವಸ್ಥೆನಾ ಪ್ರಶ್ನಾ ಮಾಡ್ತೀನಿ ಹೋರಾಟ ಮಡ್ತೀನಿ ಅಂಗ ಇಂಗ ಅನ್ಕಂಡು ಹೋಗಿ ಪ್ರಾಣನೇ ಕಳ್ಕಂಡ, ಇರವ ಒಬ್ಬ ಮಗ ನೀನು ನಂಗ ಎಲ್ಲಿ ಕೈ ತಪ್ಪೋದಯ್ ಅಂತ ಭಯ ಕಪ್ಪ ನಂಗ” ಅಂದ್ರು ಈ ಸಂದರ್ಭದಲ್ಲಿ ನನ್ನಪ್ಪನ ಕೋಪದ ಹಿಂದೆ ಇದ್ದ ನನ್ನ ಮೇಲಿನ ಕಾಳಜಿಯನ್ನು ಕಂಡು ಆ ವಯಸ್ಸಿನಲ್ಲೇ ಸಂತೋಷದ ಕಣ್ಣೀರನ್ನು ಹಾಕಿದ್ದೆ…! ನನ್ನಪ್ಪ ಹೇಳಿದ ಈ ನೈಜ ಘಟನೆ ನನ್ನ ಮೇಲೆ ತುಂಬ ಪರಿಣಾಮ ಬೀರಿಬಿಟ್ಟಿತ್ತು.

ನಾನು ಪದವಿ ವ್ಯಾಸಂಗವನ್ನು ಶುರು ಮಾಡಿದ ನಂತರವಂತೂ ಸ್ವತಹ ನನ್ನ ಅತ್ತೆ ಶಿವಮ್ಮ ರವರ ಬಳಿ ಈ ವಿಚಾರವಾಗಿ ಸಾಕಷ್ಟು ಚರ್ಚೆ ಮಾಡಲು ಪ್ರಾರಂಭಿಸಿದೆ ಆಗ ಅವರು ಬಹಳ ವಿಮರ್ಶಾತ್ಮಕವಾಗಿ ಈ ವಿಚಾರದ ಬಗ್ಗೆ ಮಾಹಿತಿಗಳನ್ನು ಬಿಚ್ಚಿಡುತ್ತಿದ್ದರು, ಅವರು ಹೇಳಿದ ಮಾಹಿತಿ ಈಗಲೂ ಕಲ್ಪಿಸಿಕೊಂಡರು ಮೈ ರೋಮಾಂಚನ ಎನಿಸಿಬಿಡುತ್ತದೆ.ನನ್ನ ಮಾವ ನಾರಾಯಣಸ್ವಾಮಿ ಮತ್ತು ವಿ.ಶ್ರೀನಿವಾಸ್ ಪ್ರಸಾದ್ ಸಾಹೇಬರು ಇಬ್ಬರು ಸಹಪಾಠಿ ಮತ್ತು ಸ್ನೇಹಿತರಾಗಿದ್ದರು ಈ ದುರಂತ ಘಟಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ರವರಿಗೆ ತನ್ನ ಸಮುದಾಯ ಮತ್ತು ಸ್ನೇಹಿತನಗಾದ ಅನ್ಯಾಯದಿಂದ ಮಾನಸಿಕವಾಗಿ ನೋವುಂಟಾಗಿ ಆ ಸಂದರ್ಭದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗಿದ್ದವು ಎಂದರೆ ಪ್ರಸ್ತುತ ಇಂದಿಗೂ ವಿ. ಶ್ರೀನಿವಾಸಪ್ರಸಾದ್ ಸಾಹೇಬರನ್ನು ನನ್ನ ಕುಟುಂಬ ಪ್ರತಿದಿನವೂ ಸ್ಮರಿಸುತ್ತದೆ ಹಾಗೂ ಪ್ರತಿದಿನವೂ ನಮ್ಮ ಮನೆಯಲ್ಲಿ ಈ ಘಟನೆಯ ಕುರಿತು ಮಾತು ಬಂದಾಗ ಪ್ರಸಾದ್ ಸಾಹೇಬರ ಗತ್ತು ಗಾಂಭೀರ್ಯವೂ ವಿಧವಿಧವಾಗಿ ವಿಮರ್ಶಿಸಲ್ಪಡುತ್ತದೆ ತನ್ನ ಸಮುದಾಯಕ್ಕೆ ನ್ಯಾಯ ಕೊಡಿಸುವ ಏಕ ಮಾತ್ರ ಉದ್ದೇಶದಿಂದ ” ತನ್ನ ಮಂತ್ರಿ ಪದವಿಯನ್ನು ತ್ಯಾಗ ಮಾಡುವ” ಮುಕ್ತ ಮನಸ್ಸು ಮತ್ತು ಧೈರ್ಯ ಸ್ವಾಭಿಮಾನ ಪ್ರಸ್ತುತ ರಾಜಕಾರಣಿಗಳಿಗೆ ಮಾದರಿ.

ಬಂಧುಗಳೇ ಈ ಘಟನೆಯ ಕುರಿತು ಹಿರಿಯರಾದ ಮುಳ್ಳೂರು ನಾಗರಾಜ್ ರವರು ಬರೆದ ಬದನಾಳು ದುರಂತ ಎಂಬ ಪುಸ್ತಕವನ್ನು ಓದಿದ ನಂತರವಂತು ನನಗೆ ಪ್ರಸಾದ್ ಸಾಹೇಬರ ಮೇಲಿದ್ದ ಗೌರವ ದುಪ್ಪಟ್ಟಾಗಿ ಬಿಟ್ಟಿತು. ಒಂದು ಖಾಸಗಿ ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿಯಲ್ಲಿ ಪ್ರಸಾದ್ ಸಾಹೇಬರನ್ನು ಭೇಟಿಯಾಗುವ ಸುಸಂದರ್ಭ ಒದಗಿ ಬಂದಿತು ಆಗ ಅಲ್ಲಿ ಜನಜಂಗುಳಿ ಬಹಳಷ್ಟಿತ್ತು ಮೊದಲ ಬಾರಿ ಪ್ರಸಾದ್ ಸಾಹೇಬರನ್ನು ಕಂಡು ಪುಳಕಿತನಾದ ನಾನು ‘ ಸರ್ ನಾನು ಕಿರುಗುಂದ ಬಿ.ಆರ್.ಭಾಸ್ಕರ್ ಅವರ ಮೊಮ್ಮಗ ಎಂದೆ’ “ಹೋ ಎನ್ಮಾಡ್ತಾ ಇದೀಯಪ್ಪಾ ಚನ್ನಾಗಿ ಓದ್ಬೇಕು” ಎಂದರು ಸರಿ ಸರ್ ಎಂದೇ ದುರಂತ ಅದೇ ಕೊನೆಯ ಭೇಟಿಯಾಗಿಬಿಟ್ಟಿತು…! ಹೀಗೆ ಜೀವನದುದ್ದಕ್ಕೂ ಸ್ವಾಭಿಮಾನ ಮತ್ತು ಸಮುದಾಯದ ವಿಚಾರದಲ್ಲಿ ರಾಜಿಯಾಗದೇ 50 ವರ್ಷ ರಾಜಕೀಯ ಜೀವನವನ್ನು ಪೂರೈಸಿದ ಮೇರು ಶಿಖರ ವಿ.ಶ್ರೀನಿವಾಸ್ ಪ್ರಸಾದ್ ಸಾಹೇಬರು ನಮ್ಮಿಂದ ದೂರವಾದದ್ದು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಆದರೆ ಅವರ ಬದುಕು ನಮಗೆ ಸ್ಪೂರ್ತಿಯಾಗಿ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗೆ ದಾರಿ ದೀಪವಾಗಿದೆ.

______ಮಧುಶಾಕ್ಯದೊರೆ

ಹಂಚಿಕೊಳ್ಳಿ / Share

Leave a Reply

Your email address will not be published. Required fields are marked *

ಮೇಲಕ್ಕೆ