2026ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಿರುವ ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆಯು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ (Scheduled Caste) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಜಾತಿ ಪ್ರಮಾಣ ಪತ್ರದ ಬಗ್ಗೆ ಎಚ್ಚರ ವಹಿಸಬೇಕಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಹೊಸ ನಿಯಮ?
ರಾಜ್ಯ ಸರ್ಕಾರವು ಆದೇಶ ಸಂಖ್ಯೆ: ಸಕ ಇ 08 ಎಸ್ಎಲ್ ಪಿ 2024 ರನ್ವಯ, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಒಳಮೀಸಲಾತಿಯನ್ನು (Internal Reservation) ಕಲ್ಪಿಸಿದೆ.
ಇದರ ಅನ್ವಯ ಪರಿಶಿಷ್ಟ ಜಾತಿಯನ್ನು ಈ ಕೆಳಗಿನಂತೆ ವರ್ಗೀಕರಣ ಮಾಡಲಾಗಿದೆ:
- ಪ್ರವರ್ಗ-ಎ (Category-A)
- ಪ್ರವರ್ಗ-ಬಿ (Category-B)
- ಪ್ರವರ್ಗ-ಸಿ (Category-C)
ಆದ್ದರಿಂದ, 2026ರ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು, ತಮ್ಮ ಜಾತಿ ಪ್ರಮಾಣ ಪತ್ರದಲ್ಲಿ ಈ ಒಳಮೀಸಲಾತಿ ವಿವರಗಳು (ಪ್ರವರ್ಗ-ಎ, ಬಿ ಅಥವಾ ಸಿ ಎಂದು) ಮುದ್ರಿತವಾಗಿರಬೇಕು. ಅಂತಹ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರ್ ಅವರಿಂದ ಪಡೆದು, ಆ ಪ್ರಮಾಣ ಪತ್ರದ ಆರ್.ಡಿ (RD Number) ಸಂಖ್ಯೆಯನ್ನೇ ಆನ್ಲೈನ್ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.
ಆದರೆ ಕೆಲವು ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಈ ಮೊದಲೇ ಪಡೆದಿದ್ದ ಅಂದರೆ ಒಳಮೀಸಲಾತಿ ವಿವರಗಳು ಮುದ್ರಿತವಾಗಿಲ್ಲದಿರುವ ಜಾತಿ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆಯನ್ನೇ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ -2026 ರ ಅರ್ಜಿಯಲ್ಲಿ ನಮೂದಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಅಂತಹ ವಿದ್ಯಾರ್ಥಿಗಳು ಒಳಮೀಸಲಾತಿ ವಿವರ ಇರುವ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸುವ ಅಗತ್ಯವಿದೆ.
ಪ್ರಮುಖ ಸೂಚನೆ: ಯಾವ ಅಭ್ಯರ್ಥಿಗಳು ಒಳಮೀಸಲಾತಿ ವಿವರವಿರುವ (ಪ್ರವರ್ಗ-ಎ, ಬಿ, ಸಿ) ಪ್ರಮಾಣ ಪತ್ರದ ಆರ್.ಡಿ ಸಂಖ್ಯೆಯನ್ನು ಅರ್ಜಿಯಲ್ಲಿ ನೀಡುತ್ತಾರೋ, ಅವರನ್ನು ಮಾತ್ರ ಆಯಾ ವರ್ಗಕ್ಕೆ ನಿಗದಿಯಾಗುವ ಸೀಟುಗಳ ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ರಾಜ್ಯ ಯೋಜನಾ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಆದರ್ಶ ವಿದ್ಯಾಲಯದ ಪ್ರವೇಶ ಬಯಸುವ ಎಸ್ಸಿ (SC) ಸಮುದಾಯದ ವಿದ್ಯಾರ್ಥಿಗಳು ಈ ಕೂಡಲೇ ತಮ್ಮ ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿಕೊಳ್ಳಿ.
