ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ, ಇದೆಲ್ಲ ನಿಮಗೆ ತಿಳಿದಿರುವ ವಿಷಯ. 1 ಗ್ರಾಂ ಚಿನ್ನ 6000 ರೂಪಾಯಿಗಳನ್ನು ಮೀರಿದೆ. ಕಳೆದ ಒಂದು ವರ್ಷದಲ್ಲಿ, 1 ಗ್ರಾಂ ಚಿನ್ನದ ಬೆಲೆ 1000 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ಏರಿಕೆಯು ಸಾಮಾನ್ಯ ಮನುಷ್ಯನಿಗೆ ಚಿನ್ನದ ಖರೀದಿಯನ್ನು ಕಷ್ಟಕರವಾಗಿಸುತ್ತಿದೆ. ಇದರ ಹಿಂದಿನ ಕಾರಣ ಏನು? ಬೆಲೆ ಇಳಿಕೆ ಯಾವಾಗ? ನಿಮ್ಮ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಈ ಲೇಖನವನ್ನು ಸಂಪೂರ್ಣ ಓದಿ.
ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕೇವಲ ಒಂದೇ ಒಂದು ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಭಾರತೀಯರು ಹೆಚ್ಚಿದ ಚಿನ್ನದ ಖರೀದಿಯಿಂದಾಗಿ ಚಿನ್ನದ ದರ ಏರಿಕೆಯಾಗಿದೆ ಅಂದುಕೊಳ್ಳೋದು ಕೂಡ ತಪ್ಪು.
ಆದರೆ ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿರುವುದಕ್ಕೆ ಇಡೀ ವಿಶ್ವವು ಕಾರಣ. ವಿಶ್ವದ ಬೇರೆ ಬೇರೆ ಕಡೆ ಆಗೋ ಬೆಳವಣಿಗೆಗಳು, ಉದಾಹರಣೆಗೆ.
ಕೋವಿಡ್-19 : ಕರೋಣ ಸಾಂಕ್ರಾಮಿಕ ರೋಗ ಚಿನ್ನದ ಬೆಲೆಯನ್ನು ಹೆಚ್ಚಿಸಿದೆ. ಈ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರು ಸುರಕ್ಷಿತ ಧಾಮವಾಗಿ ಚಿನ್ನದತ್ತ ಸಾಗಿದರು. ಇದರಿಂದಾಗಿ ಬೇಡಿಕೆಯಿಂದ ಚಿನ್ನದ ಬೆಲೆ ಹೆಚ್ಚಿಸಿತು.
ಡಾಲರ್‌ನಲ್ಲಿ ಇಳಿಕೆ : ಬಹುತೇಕ ದೇಶಗಳಲ್ಲಿ US ಡಾಲರ್ ಅನ್ನು ಸ್ವೀಕರಿಸಲಾಗುತ್ತದೆ. ಭಾರತದಲ್ಲಿ ಚಿನ್ನದ ಬೆಲೆ ಮತ್ತು US ಡಾಲರ್ ಇಂಡೆಕ್ಸ್ ನಡುವಿನ ಸಂಬಂಧವು ಸಾಮಾನ್ಯವಾಗಿ ವಿಲೋಮವಾಗಿರುತ್ತದೆ, ಅಂದರೆ ಒಂದು ಏರಿದಾಗ, ಇನ್ನೊಂದು ಕೆಳಗಿಳಿಯುತ್ತದೆ ಮತ್ತು ಅಮೆರಿಕದ ಡಾಲರ್‌ಗೆ ಹೋಲಿಕೆ ಮಾಡಿದರೆ ಭಾರತದ ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತಿದ್ದು, ಭಾರತ ದೇಶವು ಡಾಲರ್ ಲೆಕ್ಕದಲ್ಲೇ ಚಿನ್ನವನ್ನು ಖರೀದಿ ಮಾಡುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಚಿನ್ನದ ದರ ಏರುತ್ತಿದೆ.
ಪ್ರಪಂಚದಾದ್ಯಂತ ಷೇರು ಮಾರುಕಟ್ಟೆ ಏರಿಳಿತಗಳು : ಷೇರು ಮಾರುಕಟ್ಟೆಯ ಏರಿಳಿತಗಳು ಖಂಡಿತವಾಗಿಯೂ ಚಿನ್ನದ ದರದ ಮೇಲೆ ಪರಿಣಾಮ ಬೀರಬಹುದು. ಸ್ಟಾಕ್ ಮಾರುಕಟ್ಟೆಗಳು ಕುಸಿದಾಗ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನದಂತಹ ಸುರಕ್ಷಿತ ಸ್ವತ್ತುಗಳತ್ತ ತಿರುಗುತ್ತಾರೆ ಮತ್ತು ಚಿನ್ನವು ಹಣದುಬ್ಬರದ ವಿರುದ್ಧ ರಕ್ಷಣೆ ನೀಡುತ್ತದೆ. ಇದರಿಂದ ಚಿನ್ನಕ್ಕೆ ಹೆಚ್ಚಿದ ಬೇಡಿಕೆ ಬೆಲೆ ಏರಿಕೆಯಾಗಿದೆ.
ರಷ್ಯಾ – ಉಕ್ರೇನ್ ಮತ್ತು ಇಸ್ರೇಲ್ – ಪ್ಯಾಲೆಸ್ಟೇನ್ ಯುದ್ದಗಳು : ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ನಡುವಿನ ಯುದ್ಧಗಳು, ಸುರಕ್ಷಿತ ಆಸ್ತಿಯ ಸ್ಥಿತಿಯಿಂದಾಗಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರಬಹುದು. ಮತ್ತು ಕೆಲವು ನೆಟ್‌ವರ್ಕ್ ಮತ್ತು ಭದ್ರತಾ ಸಮಸ್ಯೆಗಳು ಹಣದೊಂದಿಗೆ ವ್ಯವರಿಸುವುದನ್ನು ತಡೆಯಬಹುದು ಅದರಿಂದಾಗಿ, ಹೂಡಿಕೆದಾರರು ಚಿನ್ನದ ಕಡೆಗೆ ಹೋಗುತ್ತಿರುವುದು ಬೇಡಿಕೆಗಳನ್ನು ಮತ್ತು ಬೆಲೆಗಳನ್ನು ಹೆಚ್ಚಿಸುತ್ತದೆ.
ಚೀನಾದಲ್ಲಿ ಚಿನ್ನದ ಬೇಡಿಕೆ : ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಮೀಸಲುಗೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ, ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಮಾತ್ರವಲ್ಲ, ವರದಿಗಳ ಪ್ರಕಾರ, ಚೀನಾದಲ್ಲಿ ಹೊಸ ಟ್ರೆಂಡ್ ಹೊರಹೊಮ್ಮಿದ್ದು, ಚೀನಾದ ಯುವಜನರಲ್ಲಿ ಚಿನ್ನದ ಖರೀದಿಯು ಜನಪ್ರಿಯವಾಗುತ್ತಿದೆ.
ಹಾಗೆ, ಅಂತಿಮವಾಗಿ ಮತ್ತು ಅತಿ ಮುಖ್ಯವಾಗಿ, ಕೇಂದ್ರ ಬಜೆಟ್‌ನ ನಿರ್ಧಾರ ಕೂಡಾ ಚಿನ್ನದ ದರ ಏರಿಕೆಗೆ ಕಾರಣವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಬಾರ್‌ಗಳ ಮತ್ತು ಬಿಸ್ಕಿಟ್ ಮೇಲಿನ ಆಮದು ಸುಂಕ ಏರಿಕೆ ಮಾಡಿದ ಕಾರಣ, ಏಕಾಏಕಿ ಚಿನ್ನದ ರೇಟು ಗಗನಕ್ಕೆ ಏರುವಂತಾಗಿದೆ.
ಚಿನ್ನದ ಬೆಲೆ ಇಳಿಯಲಿದಿಯೇ?
ಚಿನ್ನದ ಗಣಿಗಾರಿಕೆ ಮತ್ತು ಸಾರವು ತುಂಬಾ ಕಷ್ಟಕರವಾಗಿರುವುದರಿಂದ ಚಿನ್ನದ ದರ ಕಡಿಮೆಯಾಗುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ, ನಮ್ಮ ಜನರು ತಮ್ಮ ಬಳಿ ಇರುವ ಚಿನ್ನವನ್ನು ಲಾಭಕ್ಕಾಗಿ ಮಾರಾಟ ಮಾಡಲು ನಿರ್ಧರಿಸಿದರೆ. ಆಗ ಚಿನ್ನವು ಸುಲಭ ಸಿಗುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು. ಚಿನ್ನದ ರೇಟು 1 ಗ್ರಾಂಗೆ 3 ಸಾವಿರ ಇದ್ದಾಗ ಖರೀದಿ ಮಾಡಿದ್ದವರು ತಮ್ಮ ಬಳಿ ಇರುವ ಚಿನ್ನದ ನಾಣ್ಯ ಮತ್ತು ಬಿಸ್ಕೇಟ್ ಸೇರಿದಂತೆ ಯಾವುದೇ ಸ್ವರೂಪದ ಚಿನ್ನವನ್ನ ಈಗ ಮಾರಾಟ ಮಾಡೋಕೆ ಹೊರಟರೆ ಸದ್ಯದ ಬೆಲೆಯಲ್ಲಿ ಡಬಲ್ ಹಣ ಸಿಗುತ್ತೆ. ಆದ್ರೆ, ಈ ಸಾಧ್ಯತೆ ಅತಿ ಕಡಿಮೆ ಎನ್ನಬಹುದೇನೋ. ಯಾಕಂದ್ರೆ ನಮ್ಮ ಜನ ಚಿನ್ನದ ನಾಣ್ಯ, ಬಿಸ್ಕೇಟ್‌ಗಿಂತಲೂ ಆಭರಣಗಳ ಮೇಲೇ ಹೆಚ್ಚಿನ ಹೂಡಿಕೆ ಮಾಡಿರ್ತಾರೆ. ತಮ್ಮ ಬಳಿ ಇರೋ ಚಿನ್ನದ ಆಭರಣಗಳನ್ನ ಮಾರೋದಕ್ಕೆ ಗೃಹಿಣಿಯರು ಮುಂದಾಗೋ ಸಾಧ್ಯತೆ ಅತಿ ಕಡಿಮೆ.
ಚಿನ್ನದ ರೇಟು ಇನ್ನೂ ಹೆಚ್ಚಾಗಬಹುದು ಅನ್ನೋ ಆತಂಕ ಏನೋ ಇದೆ. ಹಾಗಂತಾ ಈಗಲೇ ಸಾಕಷ್ಟು ಖರೀದಿ ಮಾಡಿಟ್ಟುಕೊಳ್ಳೋಣ ಅನ್ನೋ ಆತುರ ಅಂತೂ ಬೇಡವೇ ಬೇಡ.. ಚಿನ್ನದ ರೇಟು ಇನ್ನಷ್ಟು ಹೆಚ್ಚಾಗಬಹುದು ಅನ್ನೋ ಕಾರಣಕ್ಕೆ ಅದರ ಮೇಲೆ ಇನ್ವೆಸ್ಟ್ ಮಾಡೋಣ ಅನ್ನೋ ಯೋಚನೆಯೂ ಸರಿಯಲ್ಲ ಎಂಬುದು ತಜ್ಞರ ಮತ್ತು ತಿಳಿದವರ ಸಲಹೆ.
-ಮನೋಜ್
ವರ್ಷ | ಸರಾಸರಿ ಚಿನ್ನದ ಬೆಲೆ (ಪ್ರತಿ 1 ಗ್ರಾಂ) |
1980 | Rs.180 |
1990 | Rs.320 |
2000 | Rs.450 |
2010 | Rs.1850 |
2011 | Rs.2600 |
2012 | Rs.3150 |
2013 | Rs.2900 |
2014 | Rs.2750 |
2015 | Rs.2600 |
2016 | Rs.2850 |
2017 | Rs.2950 |
2018 | Rs.3100 |
2019 | Rs.3500 |
2020 | Rs.4950 |
2021 | Rs.5200 |
2022 | Rs.4850 |
2023 | Rs.6450 |
2024 | Rs.7170 |